ಸೋಮವಾರ, ಡಿಸೆಂಬರ್ 8, 2014

ಕರ್ನಾಟಕ ಮೊಬೈಲ್‌ ಒನ್‌ ವ್ಯವಸ್ಥೆ


ಮೊಬೈಲ್‌ನಲ್ಲೇ 4 ಸಾವಿರ ಸರ್ಕಾರಿ, ಖಾಸಗಿ ಸೇವೆ!

    Dec 08, 2014

    - ಇಂತಹ ವ್ಯವಸ್ಥೆ ದೇಶದಲ್ಲೇ ಮೊದಲು

    - ಇಂದು ರಾಷ್ಟ್ರಪತಿ ಪ್ರಣಬ್‌ರಿಂದ ಬೆಂಗಳೂರಲ್ಲಿ ಚಾಲನೆ

    - ಪರೀಕ್ಷೆ ಫ‌ಲಿತಾಂಶದಿಂದ ಹಿಡಿದು ಮೊಬೈಲ್‌ ರೀಚಾರ್ಜ್‌, ಟ್ಯಾಕ್ಸಿ ಬುಕಿಂಗ್‌ನಂತಹ ಸೇವೆ ನೀಡುವ 'ಮೊಬೈಲ್‌ ಒನ್‌'

    ಯಾವ್ಯಾವ ಸೇವೆ ಲಭ್ಯ?

    ವಿದ್ಯುತ್‌, ನೀರು, ಫೋನ್‌ ಇತ್ಯಾದಿ ಬಿಲ್‌ ಪಾವತಿ, ಪೊಲೀಸ್‌ ದೂರು, ತೆರಿಗೆ ಪಾವತಿ, ಎಲ್‌ಐಸಿ ಪ್ರೀಮಿಯಂ ಪಾವತಿ, ಬಸ್‌-ರೈಲ್ವೆ ಟಿಕೆಟ್‌ ಕಾಯ್ದಿರಿಸುವಿಕೆ, ಬ್ಯಾಂಕಿಂಗ್‌ ಸೇವೆಗಳು, ಆರೋಗ್ಯ ಸೇವೆಗಳು, ಖಾಸಗಿ ಕ್ಯಾಬ್‌-ಆಟೋಗಳ ಬುಕಿಂಗ್‌, ಎಲ್ಲಾ ರೀತಿಯ ಮೊಬೈಲ್‌ ರೀಚಾರ್ಜ್‌, ಜನನ, ಮರಣ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಕೆ, ಪ್ಯಾಕೇಜ್‌ ಟೂರ್‌ ಬುಕಿಂಗ್‌, ಪಾಸ್‌ಪೋರ್ಟ್‌ ಅರ್ಜಿ ಸಲ್ಲಿಕೆ, ವಿವಿಧ ಉದ್ಯೋಗಕ್ಕೆ ಅರ್ಜಿ ಸಲ್ಲಿಕೆ, ಕುಂದು-ಕೊರತೆ ದೂರು ಸಲ್ಲಿಕೆ ಸೇರಿ ಹತ್ತು ಹಲವು ಸೌಲಭ್ಯ

    ಸೇವೆ ಪಡೆಯೋದು ಹೇಗೆ?

    - ಸಾಮಾನ್ಯ ಮೊಬೈಲ್‌ ಆಗಿದ್ದರೆ 161 ಸಂಖ್ಯೆಗೆ ಕರೆ ಮಾಡಿ

    - ಸ್ಮಾರ್ಟ್‌ಫೋನ್‌ ಇದ್ದರೆ 1800425425425 ಮಿಸ್ಡ್ ಕಾಲ್‌ ನೀಡಿ. ನಿಮ್ಮ ಸ್ಕ್ರೀನ್‌ ಮೇಲೆ ಬರುವ ಲಿಂಕ್‌ಗೆ ಕ್ಲಿಕ್‌ ಮಾಡಿ ಆ್ಯಪ್‌ ಡೌನ್‌ಲೋಡ್‌ ಮಾಡಿ ನೋಂದಾಯಿಸಿ ಸೇವೆ ಪಡೆಯಿರಿ.

    - ಆ್ಯಂಡ್ರಾಯ್ಡ ಆಧರಿತ ಫೋನ್‌ ಇದ್ದರೆ ಗೂಗಲ್‌ ಪ್ಲೇಸ್ಟೋರ್‌ಗೆ ಹೋಗಿ ಕರ್ನಾಟಕ ಮೊಬೈಲ್‌ ಒನ್‌ ಎಂಬ ಆ್ಯಪ್‌ ಡೌನ್‌ಲೋಡ್‌ ಮಾಡಿ ನೋಂದಾಯಿಸಿ ಸೇವೆ ಪಡೆಯಿರಿ

    - ಐಫೋನ್‌ ಹೊಂದಿದ್ದವರು 'ಐಒಎಸ್‌' ಮೂಲಕ ಈ ಸೇವೆ ಪಡೆಯಬಹುದು.

    ಬೆಂಗಳೂರು: ಕನ್ನಡಿಗರು ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ನಾಲ್ಕು ಸಾವಿರ ಸರ್ಕಾರಿ ಹಾಗೂ ಖಾಸಗಿ ಸೇವೆಗಳನ್ನು ಪಡೆಯಬಹುದಾದ ದೇಶದ ಮೊದಲ 'ಮೊಬೈಲ್‌ ಒನ್‌' ಸೇವೆ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ.

    ರಾಜ್ಯ ಸರ್ಕಾರ ಈ ಸೇವೆ ಆರಂಭಿಸುತ್ತಿದ್ದು, ಮೊಬೈಲ್‌ ಇ-ಆಡಳಿತದಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಲಿದೆ. ಸೋಮವಾರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ರಾಜ್ಯಕ್ಕೆ ಅರ್ಪಿಸಲಿದ್ದಾರೆ.

    ಪೊಲೀಸ್‌, ಸಾರಿಗೆ, ಗ್ರಾಮೀಣಾಭಿವೃದ್ಧಿ, ಕೆಎಸ್‌ಆರ್‌ಟಿಸಿ ಸೇರಿದಂತೆ ವಿವಿಧ ಇಲಾಖೆಗಳ 632 ಸೇವೆಗಳು ಹಾಗೂ ಸುಮಾರು 3,500 ಗ್ರಾಹಕರ ವ್ಯಾಪಾರ-ವಹಿವಾಟಿಗೆ ಸಂಬಂಧಿಸಿದ ಖಾಸಗಿ ಸೇವೆಗಳು ಸೇರಿದಂತೆ ಒಟ್ಟಾರೆ ನಾಲ್ಕು ಸಾವಿರಕ್ಕೂ ಅಧಿಕ ಸೇವೆಗಳು ಒಂದೇ ಅಪ್ಲಿಕೇಷನ್‌ನಲ್ಲಿ ಲಭ್ಯವಾಗಲಿವೆ ಎಂದು ಸರ್ಕಾರ ತಿಳಿಸಿದೆ.

    ಈ ವ್ಯವಸ್ಥೆಯಲ್ಲಿ ಗ್ರಾಹಕರು ಬಿಲ್‌ ಪಾವತಿ, ದೂರು ಸಲ್ಲಿಕೆ, ಅರ್ಜಿ ಸಲ್ಲಿಕೆ ಮತ್ತಿತರ ಸೇವೆಗಳು ಲಭ್ಯವಾಗಲಿವೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿಯನ್ನೂ ಇದರಲ್ಲಿ ಪಡೆಯಬಹುದು. ಮುಂದಿನ ಹಂತದಲ್ಲಿ ಆರೋಗ್ಯ ಸೇರಿದಂತೆ ಇನ್ನೂ ಹತ್ತಾರು ಇಲಾಖೆಗಳ ಸೇವೆಗಳು ಸೇರ್ಪಡೆಗೊಳ್ಳಲಿವೆ ಎಂದು ಅವರು ತಿಳಿಸಿದರು.

    ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯಪಾಲ ವಜುಭಾಯಿ ವಾಲಾ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಇ-ಆಡಳಿತ ಇಲಾಖೆ ಕಾರ್ಯದರ್ಶಿ ಶ್ರೀವತ್ಸ ಕೃಷ್ಣ , ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ರತನ್‌ ಕೇಲ್ಕರ್‌ ಉಪಸ್ಥಿತರಿರುವರು.





*@*@*@*@*@*@*@*@*@*



ಮೊಬೈಲ್ ಒನ್ ಕರ್ನಾಟಕ ನಂಬರ್ ಒನ್
mobile-one


ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಕನಸು ನನಸು ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕ ಮೊದಲ ಹೆಜ್ಜೆ ಇಟ್ಟಿದೆ.

ರಾಜ್ಯದ ಐದೂವರೆ ಕೋಟಿ ಮೊಬೈಲ್ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಹೊರತಂದಿರುವ ಮೊಬೈಲ್ ಒನ್ ಸೇವೆ ಮೂಲಕ ನಾಗರೀಕರು 4 ಸಾವಿರಕ್ಕೂ ಅಧಿಕ ಸವಲತ್ತುಗಳನ್ನು ಬೆರಳ ತುದಿಯಲ್ಲಿ ಪಡೆಯಬಹುದು. ದುಬಾರಿ ಸ್ಮಾರ್ಟ್‌ಫೋನ್‌ನಿಂದ ಹಿಡಿದು ಸಣ್ಣಪುಟ್ಟ ಮೊಬೈಲ್‌ನಲ್ಲಿಯೂ ಸರ್ಕಾರದ ಈ ಸೇವೆ ಕಾರ್ಯ ನಿರ್ವಹಿಸಲಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಆ್ಯಪ್ ಅಥವಾ ಬ್ರೌಸರ್ ಮೂಲಕ, ಸಾಮಾನ್ಯ ಬಳಕೆದಾರರು ಕರೆಗಳ ಮೂಲಕ ಈ ಸೇವೆ ಪಡೆಯಬಹುದಾಗಿದೆ. ಈ ಪ್ರಯತ್ನ ದೇಶದಲ್ಲೇ ಮೊದಲು.

ಮೊಬೈಲ್ ಒನ್‌ಗೆ ಪ್ರವೇಶ ಹೇಗೆ?

3 ಮಾರ್ಗವಿದೆ. ನೇರವಾಗಿ www.karnataka.gov.in ಗೆ ಭೇಟಿ ನೀಡಿ ಮೊಬೈಲ್ ಸಂಖ್ಯೆ ನಮೂದಿಸಿ ನೋಂದಣಿ ಮಾಡಿಕೊಳ್ಳಬೇಕು.

ಒಂದೊಮ್ಮೆ ಸ್ಮಾರ್ಟ್‌ಫೋನ್‌ನಲ್ಲಿ ಕರ್ನಾಟಕ ಮೊಬೈಲ್ ಒನ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕಾದರೆ 1800425425425ಕ್ಕೆ ಕರೆ ಮಾಡಬೇಕು. ನಂತರ ನಿಮ್ಮ ಆಪರೇಟಿಂಗ್ ಸಿಸ್ಟಂಗೆ ಅನುಗುಣವಾಗಿ ಬೇಕಾದ ಆ್ಯಪ್‌ನ ಲಿಂಕ್ ದೊರೆಯುತ್ತದೆ. ಆ್ಯಂಡ್ರಾಯ್ಡ್, ಆಪಲ್, ಬ್ಲಾಕ್ ಬೆರ್ರಿ, ವಿಂಡೋಸ್ ಆಪರೇಟಿಂಗ್ ಸಿಸ್ಟಮ್‌ಗಳ ಪ್ಲೇಸ್ಟೋರ್‌ನಲ್ಲಿ ಈ ಅಪ್ಲಿಕೇಶನ್ ಲಭ್ಯವಿದೆ.

ಸಾಮಾನ್ಯ ಫೋನ್ ಬಳಕೆದಾರರಾದರೆ ಧ್ವನಿ ಆಧಾರದ ಸೇವೆಗೆ 161 ಡಯಲ್ ಮಾಡಬೇಕು. ನೋಂದಣಿ ಮಾಡಿದ ಬಳಿಕ ಮೊಬೈಲ್‌ಗೆ ಸಂದೇಶ ಬರುತ್ತದೆ. ಅಲ್ಲಿ ನೀಡುವ ಪಿನ್ ನಿಮ್ಮ ಲಾಗ್ ಇನ್ ಪಾಸ್‌ವರ್ಡ್ ಆಗಿರುತ್ತದೆ.

ಉಪಯೋಗ ಏನು?

ರಾಜ್ಯ ಹಾಗೂ ಕೇಂದ್ರ ಸರ್ಕಾರದ 500ಕ್ಕೂ ಅಧಿಕ ಸೇವೆಗಳು ಈ ಪೋರ್ಟ್‌ಲ್ ಅಥವಾ ಆಪ್‌ನಲ್ಲಿ ಲಭ್ಯವಿದೆ. ಉದಾಹರಣೆಗೆ ಸಕಾಲ, ಸಂಚಾರ ಪೊಲೀಸ್, ಆದಾಯ ತೆರಿಗೆ, ಪಾಸ್‌ಪೋರ್ಟ್, ವಿದ್ಯುತ್ ನೀರು ಬಿಲ್ ಪಾವತಿ, ಆಸ್ತಿ ತೆರಿಗೆ..

ಖಾಸಗಿ ಕಂಪನಿಗಳ ವ್ಯವಹಾರಕ್ಕೆ ಸಂಬಂಧಿಸಿ ಸಾಮಾನ್ಯ ಜನರಿಗೆ ನೆರವಾಗುವ 4 ಸಾವಿರಕ್ಕೂ ಅಧಿಕ ಸೇವೆಗಳೂ ದೊರೆಯಲಿದೆ. ಉದಾಹರಣೆಗೆ ಮೊಬೈಲ್ ಬಿಲ್ ಪಾವತಿ, ರೈಲು, ಬಸ್ ಟಿಕೆಟ್ ಬುಕಿಂಗ್, ಟ್ಯಾಕ್ಸಿ ಬುಕಿಂಗ್, ಬ್ಯಾಂಕಿಂಗ್, ರೈತರಿಗೆ ಕೃಷಿ ಉತ್ಪನ್ನಗಳ ಮಾಹಿತಿ.

ಮನೆಯ ವಿದ್ಯುತ್, ನೀರು, ಫೋನ್, ಬ್ರಾಡ್‌ಬ್ಯಾಂಡ್‌ಗಳ ಬಿಲ್ ಪಾವತಿಗೆ ಒಂದೇ ವೇದಿಕೆಯಿದ್ದಂತೆ. ಈ ಪೋರ್ಟಲ್‌ದೆ ಪ್ರವೇಶಿಸಿದರೆ ಎಲ್ಲವೂ ಸ್ಮಾರ್ಟ್ ಆಗಿ ಮುಗಿಯುತ್ತದೆ.

ಸರ್ಕಾರಿ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಈ ಆಪ್ ಮೂಲಕ ಕುಳಿತಲ್ಲೇ ಎಲ್ಲವನ್ನೂ ಪರಿಶೀಲಿಸಬಹುದು.

ಭವಿಷ್ಯದಲ್ಲಿ ಎಲ್ಲ ಸೇವೆಗಳನ್ನು ಈ ಮೊಬೈಲ್ ಒನ್ ವ್ಯಾಪ್ತಿಗೆ ತರಲು ಸರ್ಕಾರ ಉದ್ದೇಶಿಸಿದೆ.

ಸರ್ಕಾರವನ್ನು ಸುಲಭವಾಗಿ ಸಂಪರ್ಕಿಸಬಹುದು

ನಾಗರಿಕ ಸಮೀಕ್ಷೆ ಹಾಗೂ ಮಾಹಿತಿ ಸಂಗ್ರಹಣೆ ವಿಭಾಗದ ಮೂಲಕ ಸರ್ಕಾರವನ್ನು ಸಾಮಾನ್ಯ ನಾಗರಿಕರು ಸುಲಭವಾಗಿ ಸಂಪರ್ಕಿಸಬಹುದು. ನಿಮ್ಮ ರಸ್ತೆಯಲ್ಲಿ ಗುಂಡಿ ಬಿದ್ದಿದ್ದರೆ ಅಥವಾ ಇತರ ಮೂಲ ಸೌಕರ್ಯಗಳ ಕೊರತೆಯಿದ್ದರೆ ಫೋಟೋ ಕ್ಲಿಕ್ಕಿಸಿ ಈ ಆಪ್‌ನಲ್ಲಿ ಆಪ್‌ಲೋಡ್ ಮಾಡಬಹುದು. ಇಂಥ ದೂರುಗಳು ಸಂಬಂಧಪಟ್ಟ ಇಲಾಖೆಗೆ ಹೋಗಿ ಅಲ್ಲಿಂದ ನಿಗದಿತ ಸಮಯದಲ್ಲಿ ಸೂಕ್ತ ಉತ್ತರ ಬರಲಿದೆ. ಕೆಲ ಸೇವೆಗಳನ್ನು ಈ ಅಪ್ಲಿಕೇಶನ್ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಲಭ್ಯವಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ